ಅನವೇಮರೆಡ್ಡಿ
ಕೊಂಡವೀಡು ರೆಡ್ಡಿರಾಜ್ಯದ ಸಮರ್ಥ ದೊರೆ (1364-86). ಇವನ ಅಣ್ಣ ಅನಪೋತರಾಜನ ಮರಣಸಮಯದಲ್ಲಿ, ಅವನ ಮಗನಾದ ಕುಮಾರಗಿರಿ ಇನ್ನೂ ಬಾಲಕನಾಗಿದ್ದುದರಿಂದ ಇವನೇ ಪಟ್ಟಕ್ಕೆ ಬಂದ. ರಾಜನಾದ ಕೂಡಲೆ ಪಶ್ಚಿಮ ಗೋದಾವರಿ ಜಿಲ್ಲೆಯ ಅನ್ನದೇವನನ್ನು ಸೋಲಿಸಿದ. ನಿಡದವೋಲು ಮತ್ತು ರಾಜಮಹೇಂದ್ರಿಯ ಕೋಟೆಗಳನ್ನು ವಶಮಾಡಿಕೊಂಡು ಸಿಂಹಾಚಲದವರೆಗೂ ರಾಜ್ಯವನ್ನು ವಿಸ್ತರಿಸಿ, ಕೆಳಗಣ ಗೋದಾವರಿ ಜಿಲ್ಲೆಗಳಲ್ಲಿ ರೆಡ್ಡಿ ರಾಜ್ಯಸ್ಥಾಪನೆ ಮಾಡಿದ. ವೆಲಮ ರಾಜ್ಯದ ಮೇಲೆ ದಂಡೆತ್ತಿ ಹೋಗಿ ವಿಜಯವನ್ನು ಸಂಪಾದಿಸಿದ. ಶ್ರೀಶೈಲ ಪ್ರಾಂತದ ಮೇಲೆ ಯುದ್ಧಮಾಡಿ, ವಿಜಯನಗರದ ರಾಜರು ಆಕ್ರಮಿಸಿಕೊಂಡಿದ್ದ ಭಾಗಗಳನ್ನು ಅವರಿಂದ ಕಿತ್ತುಕೊಂಡ. ಈ ರೀತಿಯಲ್ಲಿ ಅವನು ಕೈಕೊಂಡ ಎಲ್ಲ ಯುದ್ಧಗಳಲ್ಲಿಯೂ ಜಯಶಾಲಿಯಾಗಿ ರೆಡ್ಡಿ ಸಾಮ್ರಾಜ್ಯದ ವಿಜಯಪತಾಕೆಯನ್ನು ಮೆರೆಸಿದ.			
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ